ರಚನೆ: ಸರ್ವಜ್ಞ

ಉತ್ತಮದ ವರ್ಣಿಗಳನುತ್ತಮರೆನಬೇಡ
ಮತ್ತೆ ತನ್ನಂತೆ ಬಗೆವರನೆಲ್ಲರ
ನುತ್ತಮರೆನ್ನು ಸರ್ವಜ್ಞ ||

ಸತ್ತದನು ತಿಂಬಾತ ಎತ್ತಣದ ಹೊಲೆಯನು
ಒತ್ತಿ ಜೀವವನು ಕೊರೆಕೊರೆದು ತಿಂಬಾತ
ನುತ್ತಮದ ಹೊಲೆಯ ಸರ್ವಜ್ಞ ||

ಜಾತಿಹೀನರ ಮನೆಯ ಜೋತಿ ತಾ ಹೀನವೇ
ಜಾತಿವಿಜಾತಿಯೆನಬೇಡ ದೇವನೊಲಿ
ದಾತನೇ ಜಾತ ಸರ್ವಜ್ಞ ||

ಎಲವಿಲ್ಲ ನಾಲಗೆಗೆ ಬಲವಿಲ್ಲ ಬಡವಂಗೆ
ತೊಲೆಕಂಬವಿಲ್ಲ ಗಗನಕ್ಕೆ; ದೇವರಲಿ
ಕುಲಭೇದವಿಲ್ಲ  ಸರ್ವಜ್ಞ ||

ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕು! ಆ
ಕೊಲಲಾಗದೆಂಬ ಜೈನನ ಮತವೆನ್ನ
ತಲೆಯ ಮೇಲಿರಲಿ ಸರ್ವಜ್ಞ ||

ವರ್ಗ: ಸರ್ವಜ್ಞನ ವಚನಗಳು
ವರ್ಗ: ವಚನ ಸಾಹಿತ್ಯ